ಪಿಟ್ಸ್‍ಬರ್ಗ್
ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಈ ಹೆಸರಿನ ಮೂರು ನಗರಗಳಿವೆ.  ಕ್ಯಾಲಿಪೋರ್ನಿಯ ರಾಜ್ಯದಲ್ಲೂ, ಕನ್ಸಾಸ್ ರಾಜ್ಯದಲ್ಲೂ ಇರುವುವು ಚಿಕ್ಕವು ; ಪೆನ್ಸಿಲ್ವೇನಿಯ ರಾಜ್ಯದಲ್ಲಿರುವ ಪಿಟ್ಸ್‍ಬರ್ಗ್ ಉಳಿದ ಎರಡಕ್ಕಿಂತ ದೊಡ್ಡದಾಗಿದ್ದು ಜಗತ್ತಿನ ಪ್ರಮುಖ ಉಕ್ಕು ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಿದೆ.  ಅಮೆರಿಕ ಸಂಯುಕ್ತ ಸಂಸ್ಥಾನದ ಉಕ್ಕು ಉತ್ಪಾದನಾ ಸಾಮಥ್ರ್ಯದ ಶೇಕಡ 20 ರಷ್ಟು ಇಲ್ಲಿಯದು.  ಆ ದೇಶದ ಅತಿ ದೊಡ್ಡ ಒಳನಾಡ ರೇವು ಕೂಡ ಇದೇ.  ಆಲಿಗಾನೀ ಮತ್ತು ಮೋನಾಂಗಹೀಲ ನದಿಗಳು ಸಂಗಮಿಸಿ ಒಹೈಯೊ ನದಿಯಾಗುವ ಎಡೆಯಲ್ಲಿರುವ ಈ ನಗರ ವಾಣಿಜ್ಯ ಮತ್ತು ಬ್ಯಾಂಕಿಂಗ್ ಕೇಂದ್ರ.  ಇದರ ಸುತ್ತ ಆಗ್ವಿಪ, ಮೆಕ್ಕಿಸ್ಪೋರ್ಟ್, ನ್ಯೂ ಕೆನ್‍ಸಿಂಗ್‍ಟನ್, ವಾಷಿಂಗ್ಟನ್ ಮತ್ತು ವಿಲ್ಕಿನ್ಸ್‍ಬರ್ಗ್ ಎಂಬ ಉಪನಗರಗಳೂ ಇವೆ. 

	1958-59 ರಲ್ಲಿ ದ್ವಿಶತಮಾನೋತ್ಸವ ಆಚರಿಸಿಕೊಂಡ ಪಿಟ್ಸ್‍ಬರ್ಗ್ 18 ನೆಯ ಶತಮಾನದಲ್ಲಿ ಚಿಕ್ಕ ಗ್ರಾಮವಾಗಿ ಆರಂಭವಾಗಿ ಅಲ್ಲಿಯ ಭಾರೀ ಕಲ್ಲಿದ್ದಲು ನಿಕ್ಷೇಪದಿಂದಾಗಿ ಗಾಜು ಮತ್ತು ಕಬ್ಬಿಣ ಕುಲುಮೆಗಳ ಕಾರ್ಖಾನೆ ಪಟ್ಟಣವಾಯಿತು.  ಹತ್ತಿರವೇ ತೈಲ ಮತ್ತು ನೈಸರ್ಗಿಕ ಅನಿಲ ಸಿಕ್ಕ ಮೇಲೆ ಆಂಡ್ರೂ ಕಾರ್ನೆಜಿಯ ಸಾಹಸದಿಂದ ಅದು ಉಕ್ಕಿನ ನಗರವಾಯಿತು.  ಈಗ ಅದು ಪೆಟ್ರೋಲಿಯಮ್, ಗಾಜು, ವಿದ್ಯುತ್ ಉಪಕರಣಗಳು, ಯಂತ್ರೋಪಕರಣಗಳು, ಕಲ್ಲಿದ್ದಲು, ಕೋಕ್ ರಸಾಯನಿಕಗಳು, ಆಹಾರ ವಸ್ತುಗಳು ಮೊದಲಾದುವನ್ನು ತಯಾರಿಸುವ ಬೃಹತ್ ಕೇಂದ್ರವಾಗಿದೆ.  ಅದರ ನದಿ ಬಂದರು ವರ್ಷಕ್ಕೆ 4 ಕೋಟಿ ಟನ್ ಸಾರಿಗೆಯನ್ನು ನಿರ್ವಹಿಸುತ್ತದೆ.

	1937 ರಿಂದಲೂ ಪ್ರಮುಖ ಪರಮಾಣು ಸಂಶೋಧನಾ ಕೇಂದ್ರವಾಗಿ ಅದು ಅಮೆರಿಕದ ಪ್ರಥಮ ಪರಮಾಣು ಭೇದಕ ವೇಗೋತ್ಕರ್ಷಕವನ್ನು ನಿರ್ಮಿಸಿತು.  ಇಲ್ಲಿ ಪರಮಾಣು ಸಂಶೋಧನ ಕೇಂದ್ರದಲ್ಲಿ ಪ್ರಪ್ರಥಮ ಪರಮಾಣು ಶಕ್ತಿ ಜಲಾಂತರ್ಗಾಮಿಗಳಾದ ನಾಟಿಲಸ್ ಮತ್ತು ಸ್ಕೇಟ್‍ಗಳಿಗೆ ಬೇಕಾದ ರಿಯಾಕ್ಟರುಗಳು ತಯಾರಾದವು. 1957 ರಲ್ಲಿ ಪಿಟ್ಸ್‍ಬರ್ಗಿಗೆ ಜಗತ್ತಿನಲ್ಲೇ ಪ್ರಥಮವಾಗಿ ಪರಮಾಣು ವಿದ್ಯುತ್ತಿನ ಪೂರೈಕೆಯಾಗತೊಡಗಿತು.

	ಐದು ಕಾಲೇಜು ಮತ್ತು ವಿಶ್ವವಿದ್ಯಾಲಯಗಳುಳ್ಳ ಪಿಟ್ಸ್‍ಬರ್ಗ್ ಪ್ರಮುಖ ವ್ಶೆಜ್ಞಾನಿಕ ಸಂಶೋಧನ ಕೇಂದ್ರವೂ ಹೌದು.  ತೈಲ, ವಿದ್ಯುದುಪಕರಣ ಮುಂತಾದವಕ್ಕೆ ಸಂಬಂಧಿಸಿದ 115 ಕ್ಕೂ ಆನ್ವಿತವಿಜ್ಞಾನ ಸಂಶೋಧನಾಲಯಗಳು ಇಲ್ಲಿವೆ.  ಪಿಟ್ಸ್‍ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆ ನಡೆಸಿಯೇ ಜೊನಾಸ್ ಸಾಲ್ಕ್ 1955 ರಲ್ಲಿ ಪೋಲಿಯೋ ರೋಗಕ್ಕೆ ಲಸಿಕೆಯನ್ನು ಪ್ರಕಟಿಸಿದ್ದು.  15,000 ವಿದ್ಯಾರ್ಥಿಗಳಿಗೆ ಆಶ್ರಯ ನೀಡುವ ಈ ವಿಶ್ವವಿದ್ಯಾಲಯದ 42 ಅಂತಸ್ತುಗಳು ಗಾತಿಕ್ ಶೈಲಿಯ ಗೋಪುರ ಪ್ರೇಕ್ಷಣೀಯವಾಗಿದೆ.  

	ಅನೇಕ ವೃಕೋದ್ಯಾನಗಳು, ನಾಟ್ಯ ಶಾಲೆಗಳು, ಮನೋರಂಜನ ಕೆಂದ್ರಗಳು ಉಳ್ಳ ಪಿಟ್ಸ್‍ಬರ್ಗಿನಲ್ಲಿ 1895 ರಲ್ಲಿ ಆರಂಭವಾದ ಕಾರ್ನೇಜಿ ಸಂಸ್ಥೆ ಬೃಹತ್ ಗ್ರಂಥಾಲಯ,  ಕಲಾಮಂದಿರ, ಸಂಗೀತಶಾಲೆ, ಸಭಾಮಂಟಪ ಮತ್ತು ರಂಗಮಂಟಪಗಳನ್ನೊಳಗೊಂಡಿದೆ.  7,500 ರಿಂದ 14,000 ಪ್ರೇಕ್ಷಕರಿಗೆ ಇಂಬುಳ್ಳ ಪಿಟ್ಸ್‍ಬರ್ಗ್ ಮುನಿಸಿಪಾಲ್ ಸಾಂಸ್ಕøತಿಕ ಭವನ ಆಟಪಾಠ, ಸಂಗೀತ ನಾಟಕಾದಿಗಳ ಪ್ರದರ್ಶನ ಕೇಂದ್ರವಾಗಿದೆ.  ಅದರ 36 ಮೀ.  ಎತ್ತರದ ಮತ್ತು 123 ಮೀ. ವ್ಯಾಸದ ಉಪಸಂಹರಣೀಯ ಗುಮ್ಮಟ ಜಗತ್ತಿನಲ್ಲೇ ಪ್ರಥಮವಾದ್ದು.  

	4 ವರ್ಷಗಳಿಗೊಮ್ಮೆ ಚುನಾಯಿಸಲ್ಪಡುವ 9 ಜನರ ಮೇಯರಲ್ ಕೌನ್ಸಿಲ್‍ರ ಆಡಳಿತಕ್ಕೊಳಪಟ್ಟ ಪಿಟ್ಸ್‍ಬರ್ಗಿನ ಜನಸಂಖ್ಯೆ 5,20,117 ; (1970) ಒಟ್ಟು ನಗರ ಪ್ರದೇಶದ ಜನಸಂಖ್ಯೆ 15,46,042.
(ಪಿ.ವಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ